ನಿಶ್ಚಿಂತಾತ್ಮ -
	ಸುಮಾರು 1750. ವೀರಶೈವ ಕವಿ. ವೀರಭದ್ರ ಲೀಲಾವಿಜಯವೆಂಬ ಷಟ್ಪದಿ ಕಾವ್ಯವನ್ನು ರಚಿಸಿದ್ದಾನೆ. ತನ್ನನ್ನು ಹರನ ಶ್ರೀಚರಣಾರವಿಂದ ಮಧುಕರ, ತಿರುಳಗುಣಸಂಪನ್ನ, ಪರಮಯತಿ, ಮಹಾಯತೀಶ್ವರ ಎಂದು ಕರೆದುಕೊಂಡಿದ್ದಾನೆ. 

	ಭಾಮಿನಿ ಷಟ್ಪದಿಯಲ್ಲಿರುವ ಈತನ ಕೃತಿ ವೀರಭದ್ರ ದಕ್ಷನನ್ನು ಸಂಹರಿಸಿ ವಿಜಯವನ್ನು ಮೆರೆದ ಬಹು ಜನಪ್ರಿಯ ಕಥಾವಸ್ತುವನ್ನು ಒಳಗೊಂಡಿದೆ. ದಧೀಚಿ ಮುನಿಸೂತನಿಗೆ ಹೇಳಿದ ಮೂಲಕಥೆಯನ್ನು ವಿಶೇಷವಾಗಿ ಯಾವ ವ್ಯತ್ಯಾಸವನ್ನೂ ಮಾಡದೇ ಇಲ್ಲಿ ಬಳಸಿಕೊಳ್ಳಲಾಗಿದೆ. ಕೃತಿಯಲ್ಲಿ 10 ಸಂಧಿಗಳು, ಸು. 650 ಪದ್ಯಗಳೂ ಇವೆ. ಪ್ರತೀಸಂಧಿಯ ಮೊದಲಿಗೆ ಅರ್ಧಷಟ್ಪದಿಗಳು ಸೂಚನೆ ಪದ್ಯರೂಪದಲ್ಲಿ ಬಂದಿದೆ.									(ಆರ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ